ಕರ್ನಾಟಕದ ಉಗಮ ಮತ್ತಿತರ ವಿವರಗಳು
ಕರ್ನಾಟಕ ರಾಜ್ಯವು ಉತ್ತರದಲ್ಲಿ ಗೋದಾವರಿ ಮತ್ತು ದಕ್ಷಿಣದಲ್ಲಿ ಕಾವೇರಿ ನದಿಯ ಮಧ್ಯವಿರುವ ಫಲವತ್ತಾದ ಪ್ರದೇಶವಾಗಿದೆ. ಕರ್ನಾಟಕವನ್ನು ಕರಾವಳಿ, ಮಲೆನಾಡು ಮತ್ತು ಬಯಲು ಪ್ರದೇಶವೆಂದು ಮೂರು ಭಾಗವನ್ನಾಗಿ ಮಾಡಬಹುದು. ಒಟ್ಟೂ ೧೯೧೭೯೧ ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಭಾರತದ ೬% ಪ್ರದೇಶವನ್ನಾವರಿಸಿಕೊಂಡಿದೆ. ಮೊದಲಿಗೆ ಮೈಸೂರು ರಾಜ್ಯವೆಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈಋತ್ಯ ಭಾಗವನ್ನು ಆವರಿಸಿಕೊಂಡಿದೆ. ಉತ್ತರದಲಿ ಮಹಾರಾಷ್ಟ್ರ, ಪೂರ್ವದಲಿ ಆಂಧ್ರಪ್ರದೇಶ, ಆಗ್ನೇಯದಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ ಮತ್ತು ಗೋವಾ ರಾಜ್ಯದಿಂದ ಸುತ್ತುವರಿದಿದೆ.
ಮೈಸೂರು ರಾಜ್ಯ ಏಕೀಕರಣದೊಂಡಿದ್ದು ನವೆಂಬರ್ ೧ ೧೯೫೬ ರಲ್ಲಿ. ಹದಿನೇಳು ವರುಷದ ಬಳಿಕ ಅಂದರೆ ೧೯೭೩ ನವೆಂಬರ್ ೧ ರಂದು ಆಗಿನ ಮುಖ್ಯಮಂತ್ರಿ ಶ್ರೀ ದೇವರಾಜ್ ಅರಸ್ ನೇತೃತ್ವದಲ್ಲಿ ಕರ್ನಾಟಕವೆಂಬ ಹೆಸರು ಬಂದಿತು.
ಕರ್ನಾಟಕದ ಹವಾಮಾನ ಆಹ್ಲಾದಕರವಾಗಿದ್ದು, ವರ್ಷದ ಎಲ್ಲಾ ಕಾಲದಲ್ಲೂ ಹೆಚ್ಚೇನೂ ತಾಪಮಾನ ಬದಲಾವಣೆಗಳಿಲ್ಲದ ಪ್ರದೇಶವಾಗಿದೆ. ಈ ರಾಜ್ಯ ಕೆಲವು ಶತಮಾನಗಳ ಸಮೃದ್ಧ ಇತಿಹಾಸವನ್ನು ಹೊಂದಿದ್ದು, ಹಲವಾರು ಖ್ಯಾತ ರಾಜರುಗಳಿಂದ ಆಳಲ್ಪಟ್ಟಿದೆ. ಹಲವಾರು ಪ್ರಕೃತಿ ವಿಸ್ಮಯಗಳು, ವಿಶಾಲ ಕರಾವಳಿ, ಪಶ್ಚಿಮ ಘಟ್ಟಗಳಲ್ಲಿನ ಸಮೃದ್ಧ ಹಸಿರು, ವಿಶೇಷವಾದ ಪ್ರಾಣಿಪಕ್ಷಿಗಳು, ಆಯುರ್ವೇದ ಗಿಡಮೂಲಿಕೆಗಳು, ವಾಸ್ತುಶಾಸ್ತ್ರ ತಜ್ಞರಿಂದ ಮಾಡಲ್ಪಟ್ಟ ಇತಿಹಾಸ ಪ್ರಸಿದ್ಧ ದೇವಾಲಯಗಳು, ವಿಶ್ವವಿಖ್ಯಾತ ಜಲಪಾತಗಳು, ಅಣೆಕಟ್ಟುಗಳು, ಕೋಟೆಕೊಪ್ಪಲುಗಳು, ಬೆಟ್ಟ ಗುಡ್ಡಗಳಿಂದಲೂ, ರುದ್ರರಮಣಿಯವೂ, ಸೌಮ್ಯ ಮಧುರ ಸ್ಥಳಗಳಿಂದಲೂ ಒಳಗೂಡಿ, ಪ್ರಕೃತಿಯ ಎಲ್ಲಾ ಪದರುಗಳನ್ನು ಸ್ಪರ್ಶಿಸಿದ ಪ್ರದೇಶವೆಂಬ ಖ್ಯಾತಿ ಪಡೆದಿದೆ. ಚಿನ್ನದ ಅದಿರು ಉತ್ಪಾದನೆಯಲ್ಲೂ ಕರ್ನಾಟಕದ ಹೆಸರು ಮೇಲ್ಪಂಕ್ತಿಯಲ್ಲಿದೆ. ರಾಯಚೂರಿನ ಬಳಿ ಹಟ್ಟಿ ಎಂಬ ಸ್ಥಳ ಚಿನ್ನದದಿರಿನ ಜೊತಗೆ ಬೇರೆ ಹಲವಾರು ಅದಿರುಗಳ ಉತ್ಪಾದನೆಯಲ್ಲಿ ಪ್ರಸಿದ್ಧಿಯಾದುದು. ಒಂದೇ ರಾಜ್ಯದಲ್ಲಿ ವಿಭಿನ್ನ ಸಂಸ್ಕೃತಿಗಳಿವೆ, ಶ್ರೀಗಂಧ ಉತ್ಪಾದನೆಗೆ, ಕಾಫಿ, ಟೀ ಉತ್ಪಾದನೆ, ರೇಷ್ಮೆ ಉದ್ಯಮದಲ್ಲೂ ಕರ್ನಾಟಕ ಹೆಸರು ಮಾಡಿದೆ.
ಭಾಷೆ
ಕರ್ನಾಟಕದ ಭಾಷೆಯಾದ ಕನ್ನಡವೆಂಬುದು ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದದ್ದು. ಭಾಷೆ ಒಂದೇ ಆದರೂ ಮಾತನಾಡುವ ವಿಧಾನ, ಮತ್ತು ಪದಬಳಕೆಯ ವಿಶಿಷ್ಟತೆಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಕರ್ನಾಟಕ ಪ್ರದೇಶದಂತೆ ಕನ್ನಡ ಭಾಷೆಗೂ ಅತ್ಯಂತ ಸಮೃದ್ಧ ಇತಿಹಾಸವಿದೆ. ಎರಡು ಸಾವಿರ ವರುಷಕ್ಕೂ ಹಿಂದಿನಿಂದಲೂ ಕನ್ನಡ ಭಾಷೆ ಬಳಕೆಯಲ್ಲಿದೆ ಎಂಬುದು ಒಂದು ಅಂದಾಜು. ಇತಿಹಾಸದ ಪ್ರಕಾರ ಕನ್ನಡ ಲಿಪಿಯು ಮೂರನೇ ಶತಮಾನದಲ್ಲಿದ್ದ ಬ್ರಾಹ್ಮಿ ಲಿಪಿಯನ್ನು ಉತ್ತಮಗೊಳಿಸಿ ೫ನೇ ಶತಮಾನದಲ್ಲಿ ಕದಂಬರು ಬಳಸಲು ಪ್ರಾರಂಭಿಸಿದ್ದರು. ಕನ್ನಡ ಭಾಷಾಬಳಕೆಯ ಪ್ರಥಮ ದಾಖಲೆಯೆಂದರೆ ಹಲ್ಮಿಡಿ ಶಾಸನ, ಕ್ರಿಸ್ತ ಪೂರ್ವ ೪೫೦ರದ್ದು. ದೊರೆತ ಮೊದಲ ಕನ್ನಡ ಪುಸ್ತಕ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ’ಕವಿರಾಜಮಾರ್ಗ’.
ಕನ್ನಡ ಭಾಷೆಯ ಬೆಳವಣಿಗೆಯನ್ನು ಐದು ಘಟ್ಟದಲ್ಲಿ ವಿಂಗಡಿಸಬಹುದು. ಪೂರ್ವ ಹಳೆಗನ್ನಡ (೫ನೇ ಶತಮಾನ), ಹಳೆಗನ್ನಡ ( ಕ್ರಿಸ್ತ ಶಕ ೯೦೦ – ಕ್ರಿ.ಶ. ೧೨೦೦) ನಡುಗನ್ನಡ ( ಕ್ರಿ.ಶ. ೧೨೦೦ – ೧೭೦೦ ) , ಹೊಸಗನ್ನಡ (ಕ್ರಿ. ಶ. ೧೭೦೦ ರಿಂದ ಈಗಿನವರೆಗೆ.
ಕನ್ನಡ ನಾಡನ್ನು ಆಳಿದ ಮಹಾರಾಜರು, ಪಂಡಿತರು, ಕವಿಮಾನ್ಯರು, ಲೀಖಕರು, ಶಿಲ್ಪಿಗಳು, ಕಲೆಗಾರರು, ಮತ್ತು ಜನಪದ ಸಾಹಿತ್ಯವನ್ನು ಸೃಷ್ಟಿಸಿದ ಜನಸಾಮಾನ್ಯರು ಕನ್ನಡ ಭಾಷೆಯ ಉನ್ನತಿಗೆ ಸಹಾಯ ಮಾಡಿ, ಈಗ ನಾವೆಲ್ಲರೂ ಹೆಮ್ಮೆ ಪಡುವಂಥ ಕನ್ನಡ ಭಾಷೆಗೆ ಕಾರಣೀಕರ್ತರಾಗಿದ್ದಾರೆ. ಏಳು ಜ್ಞಾನಪೀಠ ಪ್ರಶಸ್ತಿಗಳನ್ನು ಬಾಚಿಕೊಂಡು ಭಾರತದಲ್ಲೇ ಬೇರ್ಯಾವ ಭಾಷೆಯೂ ಮಾಡದಂಥ ಸಾಧನೆ ಮಾಡಿದೆ. ಸಾಹಿತ್ಯದಲ್ಲಿ ವಿಶ್ವವೇ ತಿರುಗಿ ನೋಡುವಂಥ ಸಮೃದ್ಧತೆಯನ್ನು ಹೊಂದಿದೆ.
ಭಾರತದ ೨೨ ಅಧಿಕೃತ ರಾಷ್ಟ್ರಭಾಷೆಯಲ್ಲಿ ಕನ್ನಡಕ್ಕೂ ಮಾನ್ಯತೆ ದೊರಕಿದ್ದು, ಮತ್ತು ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿದ್ದು ಅಕ್ಟೋಬರ್ ೩೧, ೨೦೦೮ ರಲ್ಲಿ.
ಇಂಥ ಒಂದು ಸಮೃದ್ಧ ಭಾಷೆಯನ್ನು ಉಳಿಸಿ, ಬೆಳೆಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಕನ್ನಡ ಡಿಂಡಿಮದ ಬಗ್ಗೆ
ಈ ಕನ್ನಡ ಡಿಂಡಿಮ, ಕರ್ನಾಟಕದ ವೈಭವಗಳ ಕುರಿತು, ಸಂಸ್ಕೃತಿಯ ಬಗ್ಗೆ, ಕನ್ನಡ ಭಾಷೆಯ ಸಮೃದ್ಧಿಯ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ನಮ್ಮ ಒಂದು ಪುಟ್ಟ ಪ್ರಯತ್ನ. ಕಾಲಕ್ರಮೇಣ ಈ ಪ್ರಯತ್ನ ಕರ್ನಾಟಕದ ಬಗೆಗಿನ ಅರಿವಿಗೆ, ಕನ್ನಡ ಭಾಷೆಯ ಬಗೆಗಿನ ತಿಳಿವಳಿಕೆಗೆ ಒಂದು ಮಾಹಿತಿ ಕೋಶವಾಗಬಲ್ಲುದು ಎಂಬ ಹೆಬ್ಬಯಕೆ. ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ತಿಳಿಯಲು ಬಯಸುವವರಿಗೆ ಒಂದು ಸೂಕ್ತ ಅಂಕಣವಾಗಬೇಕೆಂಬ ಬಯಕೆ ಹೊತ್ತು ಬಂದಿದ್ದೇವೆ. ಈ ವೆಬ್ ಸೈಟಿನ ಹೆಸರೇ ಉಲ್ಲೇಖಿಸುವಂತೆ ಅಳಿವಿನ ಹಾದಿಯತ್ತ ಸಾಗುತ್ತಿರುವ ಕನ್ನಡ ಸಂಸ್ಕೃತಿಯನ್ನು ಜಾಗೃತಗೊಳಿಸಲು, ಕನ್ನಡಿಗರೆಲ್ಲರಿಗೂ ಅಂಥದ್ದೊಂದು ಸಾಂಸ್ಕೃತಿಕ ಎಚ್ಚರಕ್ಕೊಂದು ಧ್ವನಿಯಾಗಲೆಂಬ ಆಶಯದಿಂದ ರಾಷ್ಟ್ರಕವಿ ಕುವೆಂಪು ಬರೆದಿರುವ ’ಬಾರಿಸು ಕನ್ನಡ ಡಿಂಡಿಮವಾ.. ಓ ಕರ್ನಾಟಕ ಹೃದಯ ಶಿವಾ’ ಎಂಬ ಕವಿತೆಯ ಸಾಲಿನ್ನು ಬಳಸಿಕೊಂಡಿದ್ದೇವೆ.
- ಜೈ ಕನ್ನಡಾಂಬೆ -
Wish you all the best
ಪ್ರತ್ಯುತ್ತರಅಳಿಸಿ